ಶಿರಹಟ್ಟಿ	ಭಾರತದ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಗದಗ, ವಾಯವ್ಯಕ್ಕೆ ಹುಬ್ಬಳ್ಳಿ, ಪಶ್ಚಿಮಕ್ಕೆ ಕುಂದಗೋಳ, ಈಶಾನ್ಯ ಮತ್ತು ಪೂರ್ವಕ್ಕೆ ಮುಂಡರಗಿ, ದಕ್ಷಿಣದಲ್ಲಿ ಹಾವೇರಿ ಜಿಲ್ಲೆಯ ಸವಣೂರು, ಆಗ್ನೇಯದಲ್ಲಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕೂ ಸುತ್ತುವರಿದಿವೆ. ಎರಡು ಪಟ್ಟಣಗಳೂ 79 ಗ್ರಾಮಗಳೂ ಇರುವ ತಾಲ್ಲೂಕಿನ ವಿಸ್ತೀರ್ಣ 949.2 ಚ.ಕಿಮೀ. ಜನಸಂಖ್ಯೆ 1,83,130.

	ತುಂಗಭದ್ರಾನದಿ ಈ ತಾಲ್ಲೂಕಿನ ಆಗ್ನೇಯದ ಅಂಚಿನಲ್ಲಿ ಸ್ವಲ್ಪ ದೂರ ಹರಿದು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕನ್ನು ಬೇರ್ಪಡಿಸಿದೆ. ತಾಲ್ಲೂಕಿನಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಹರಿಯುವ ಶಿರಹಟ್ಟಿಹಳ್ಳ ತಾಲ್ಲೂಕು ಅಂಚಿನ ಬಸಾಪುರ ಮತ್ತು ಸಾಸರವಾಡ ಗ್ರಾಮಗಳ ಮಧ್ಯೆ ಹರಿದು ತುಂಗಭದ್ರೆಯನ್ನು ಸೇರುವುದು. ಉತ್ತಮ ಹವಾಗುಣ ವಿದ್ದು ವಾರ್ಷಿಕ ಮಳೆ 735 ಮಿಮೀ.

ತಾಲ್ಲೂಕಿನ ಪಶ್ಚಿಮ ಭಾಗ ಕಪ್ಪುಮಣ್ಣಿನಿಂದಲೂ ಉಳಿದ ಭಾಗ ಮರಳು ಮಿಶ್ರಿತ ಭೂಮಿಯಿಂದಲೂ ಕೂಡಿದೆ. ಜೋಳ, ನೆಲಗಡಲೆ, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ ಮುಂತಾದವನ್ನು ಬೆಳೆಯುತ್ತಾರೆ. ಕೈಮಗ್ಗದ ಬಟ್ಟೆ ತಯಾರಿಕೆ, ನೆಲಗಡಲೆ ಎಣ್ಣೆ ಉತ್ಪಾದನೆಯುಂಟು.

ಶಿರಹಟ್ಟಿಯ ಆಗ್ನೇಯಕ್ಕೆ 19 ಕಿಮೀ ದೂರದಲ್ಲಿರುವ ಬೆಳ್ಳಟ್ಟಿ ಗ್ರಾಮದಲ್ಲಿರುವ ರಾಮಲಿಂಗದೇವಾಲಯ ಪ್ರಸಿದ್ಧವಾದದ್ದು. ಶಿರಹಟ್ಟಿಯ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿರುವ ದೇವಿಹಾಳದಲ್ಲಿ ದುರ್ಗಾದೇವಿ ಯಂತಿರುವ ಅಷ್ಟಭುಜವನ್ನುಳ್ಳ ಹೊಳಲಮ್ಮ ದೇವಾಲಯವಿದೆ. ಶಿರಹಟ್ಟಿಯ ದಕ್ಷಿಣಕ್ಕೆ ಸು. 14 ಕಿಮೀ ದೂರದಲ್ಲಿರುವ ಶ್ರೀಮಂತಗಡ ಎಂಬ ನಿರ್ಜನ ಪ್ರದೇಶದಲ್ಲಿ ಒಂದು ಕೋಟೆಯಿದ್ದು ಅದರಲ್ಲಿ ವಳ್ಳಮ್ಮ ದೇವಾಲಯ ಮತ್ತು ಏಳು ಬಾವಿಗಳೂ ಇವೆ. ಶಿರಹಟ್ಟಿಯ ವಾಯವ್ಯಕ್ಕೆ ಸು.11 ಕಿಮೀ ದೂರದಲ್ಲಿರುವ ಯಳವತ್ತಿಯಲ್ಲಿ ಶಿರಹಟ್ಟಿಯ ಕಾಂಗವಾಡ ದೇಸಾಯಿ ಕಟ್ಟಿಸಿದ ಹಳೆಯ ಕೋಟೆ ಇದೆ. ಸಾಂಗ್ಲಿಯ ಚಿಂತಾಮಣಿರಾವ್ ಕೊಲ್ಲಾಪುರದ ದಂಗೆಯನ್ನು (1844) ಅಡಗಿಸಲು ಸಹಾಯ ಮಾಡಿದ್ದಕ್ಕೆ 1846ರಲ್ಲಿ ಕೋಟೆ ಮತ್ತು ಹಳ್ಳಾಪುರ ಗ್ರಾಮವನ್ನು ಅಂದಿನ ಈಸ್ಟ್ ಇಂಡಿಯ ಕಂಪನಿ ಸರ್ಕಾರ ಇನಾಮ್ ಆಗಿ ಈತನಿಗೆ ಕೊಟ್ಟಿತು. ಇಲ್ಲಿನ ಗುಂಡೇಶ್ವರ ದೇವಾಲಯ ಪ್ರಸಿದ್ಧವಾದದ್ದು. ಶಾಸನಗಳಲ್ಲಿ ಯಳವತ್ತಿಯನ್ನು ಮಹಾಗ್ರಾಮ ಮತ್ತು 120 ಮಹಾಜನರಾಡಳಿತದ ಅಗ್ರಹಾರವೆಂಬುದಾಗಿ ಉಲ್ಲೇಖಿಸಲಾಗಿದೆ. ಈ ಗ್ರಾಮವನ್ನು ಶ್ರೀರಾಮ ಸ್ಥಾಪಿಸಿದನೆಂದು ಹೇಳುವರು.								*

	ಶಿರಹಟ್ಟಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡಕ್ಕೆ ಆಗ್ನೇಯದಲ್ಲಿ 89 ಕಿಮೀ ದೂರದಲ್ಲಿ ಗದಗಿಗೆ ದಕ್ಷಿಣದಲ್ಲಿ 34 ಕಿಮೀ ದೂರದಲ್ಲಿ ಇದೆ. ಜನಸಂಖ್ಯೆ 49,619.

	ಈ ಪಟ್ಟಣದಲ್ಲಿ ಖಾನ್ ಗಾವುಂಡ ದೇಸಾಯಿ ಕಟ್ಟಿಸಿದುದೆಂದು ಹೇಳುವ ಸುತ್ತಲೂ ಕಂದಕವಿರುವ ಕೋಟೆಯಿದೆ. ಕೋಟೆಯ ಪೂರ್ವಕ್ಕೆ ಇರುವ ಅವ್ವಲಿಂಗವ್ವನವರ ಮಠ ಸುಂದರವಾದ ಕಲ್ಲುಕಟ್ಟಡ. ಲಕ್ಷ್ಮೇಶ್ವರ ದೇಸಗತಿಯ ಸ್ಥಾಪಕಳಾದ ಅವ್ವಲಿಂಗವ್ವ ಸು.260 ವರ್ಷಗಳ ಹಿಂದೆ ಕಟ್ಟಿಸಿದ ಈ ಮಠದ ಮುಖಮಂಟಪ ಸುಂದರವಾದ ಕೆತ್ತನೆಕೆಲಸದಿಂದ ಕೂಡಿದೆ. ಮಂಟಪದ ಚಾವಣಿಯಲ್ಲಿ ಕಮಲಪುಷ್ಪಗಳು ಮತ್ತು ಜೋಡಿ ಸರ್ಪಗಳಿವೆ. ಇದೊಂದು ಅಪೂರ್ವ ಕಟ್ಟಡ. ಈ ಮಠದ ವಾಯವ್ಯದಲ್ಲಿ ಫಕೀರಸ್ವಾಮಿಗಳ ಮಠವಿದೆ. ಹಿಂದು-ಮುಸಲ್ಮಾನರಿಬ್ಬರೂ ಈ ಮಠಕ್ಕೆ ನಡೆದುಕೊಳ್ಳುತ್ತಾರೆ. ಈ ಮಠದ ಜಾತ್ರೆ ಬಹು ಪ್ರಸಿದ್ಧ. 
  
	   (ಎನ್.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ